ಮಗುವಿಗೇಕೆ ತಂದೆಯ ಗೋತ್ರ ? Why does a child get his dad’s gothra? Why this bias?

ನೆನ್ನೆ ತಾನೇ ಮಹಿಳೆಯರ ದಿನಾಚರಣೆ ಮಾಡಿ, ಒಂದು ಕಡೆ ಹೆಣ್ಣಿಗೇಕೆ ಗಂಡಿನ ವಂಶದ ನಾಮಫಲಕ ತಗುಲಿ ಹಾಕ್ಬೇಕು ಎಂಬ ಪ್ರಶ್ನೆ ನೋಡಿದೆ. ಅಂದ್ರೆ, ಹೆಣ್ಣು ಮದುವೆ ಆದನಂತರ ತನ್ನ ಗಂಡನ Family name or surname ನ ತನ್ನ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತಾಳೆ. ಅದೇಕೆ? ನಾನು ಸ್ವಲ್ಪ ವರ್ಷಗಳ ಮುಂಚೆ ಇದೆ ರೀತಿ, ತಂದೆಯ ಗೋತ್ರವನ್ನೇಕೆ ಮಗುವಿಗೆ ಅಂಟಿಸುತ್ತಾರೆ? ತಾಯಿಯದ್ದಲ್ಲ ಎಂಬುದರ ಬಗ್ಗೆ ಯೋಚಿಸುತ್ತಿದ್ದೆ… ಆ ಕಥೆ ಹೀಗಿದೆ:
ನಮ್ಮ ಮನೆಯಲ್ಲಿ ಯಾರದ್ದಾದರೂ ಹುಟ್ಟು ಹಬ್ಬ ಬಂದ್ರೆ, ಅಥವಾ ವಿಶೇಷ ದಿನ ಬಂದರೆ ದೇವಸ್ಥಾನದಲ್ಲಿ ಅಭಿಷೇಕಕ್ಕೆ ಕೊಡೊ ರೂಢಿ. ಅಂತೆಯೇ, ಒಮ್ಮೆ ನನ್ನ ಅಣ್ಣನ ಹುಟ್ಟು ಹಬ್ಬ ಇದ್ದ ಸಂದರ್ಭ. ಅಮ್ಮ ದೇವಸ್ಥಾನದಲ್ಲಿ ಅಭಿಷೇಕಕ್ಕೆ ಬರ್ಸಿ ಬಾ ಅಂದ್ರು. ನಾನು ನನ್ನ ತಂದೆಯ ಹೆಸರು, ತಾಯಿಯ ಹೆಸರು, ಅಣ್ಣನ ಹೆಸರು ಮತ್ತು ನನ್ನ ಹೆಸರು, ನಮ್ಮೆಲ್ಲ ನಕ್ಷತ್ರಗಳನ್ನ ಬರೆಸಿದ್ದೆ. ಗೋತ್ರ ಅಂದಾಗ ಕೌಂಡಿನ್ಯ ಗೋತ್ರ ಅಂದೇ. ಆದರೆ ಮನೆಗೆ ಬರುವ ದಾರಿಯಲ್ಲಿ ಒಂದು ಗೊಂದಲ. ನಮ್ಮ ಮಾವನ (ಅಮ್ಮನ ತಮ್ಮ) ಗೋತ್ರ ಶ್ರೀವತ್ಸ ಗೋತ್ರ ಅಂದಿದ್ದ ನೆನಪು. ಅಂದರೆ ಅಮ್ಮನ ಗೋತ್ರವು ಶ್ರೀವತ್ಸ ಗೋತ್ರವೇ ಅಲ್ವಾ? ನಾನ್ಯಾಕೆ ಎಲ್ಲರದ್ದೂ ಕೌಂಡಿನ್ಯ ಅಂದೇ? ನಾನು ತಪ್ಪು ಬರ್ಸಿದ್ನ ಅಂತ ತಲೆ ಕೆರ್ಕೋತಿದ್ದೆ. ಮನೆಗೆ ಬಂದು ಅಮ್ಮನ್ನು ಕೇಳ್ದೆ. ನಿನ್ನ ಗೋತ್ರ ಶ್ರೀವತ್ಸ ಅಲ್ವಾ? ಕೌಂಡಿನ್ಯ ಅಂತ ಬರ್ಸಿದೀನಿ, ತಪ್ಪಾ ಅಂತ. ಅದಕ್ಕೆ ಅಮ್ಮ “ನಿಮ್ಮಪ್ಪನ್ನ ಕಟ್ಕೊಂದ್ಮೇಲೆ ಅವರ ಕುಟುಂಬಕ್ಕೆ ಸೇರಿದಿನಿ ಅಲ್ವಾ? ಅವರ ಗೋತ್ರವೇ ನಿಮಗೆಲ್ಲ ಬರತ್ತೆ.. ” ಅಂದ್ರು. ನನಗೆ ಇನ್ನೊಂದ್ ಪ್ರಶ್ನೆ ಮೂಡಿದ್ದು ‘ನಮಗೇಕೆ ಅಮ್ಮನ ಗೋತ್ರ ಬರ್ಲಿಲ್ಲ? ಪಾಪ ಹೊಟ್ಟೆನಲ್ ಇಟ್ಕೊಂಡ್ ಕಷ್ಟ ಪಟ್ಕೊಂಡ್ ಹೆತ್ತಿದ್ದು ಅಮ್ಮ” ಹೀಗೆ ಏನೇನೋ ಹುಚ್ಚು ಪ್ರಶ್ನೆಗಳು.

ಈ ಪ್ರಶ್ನೆಗಳಿಗೆ ಉತ್ತರ ದೊರೆತಿದ್ದು ಮಾತ್ರ ಹತ್ತನೇ ತರಗತಿಯಲ್ಲಿ. ಬಯಾಲಜಿ ಕ್ಲಾಸ್ ನಲ್ಲಿ ನಮ್ಮ ಮೇಷ್ಟ್ರು Genes, chromosomes, mutation ಇವುಗಳ ಬಗ್ಗೆ ಪಾಠ ಮಾಡಿದಾಗ. ನೀವು ಓದಿದ್ದ್ರೇನೋ ಆದರೆ ಮರೆತಿರಬಹುದು. ಒಮ್ಮೆ ಜ್ಞಾಪಿಸಿಕೊಳ್ಳಿ.. ಗಂಡಿನದ್ದು XY Chromosome ಮತ್ತು ಹೆಣ್ಣಿನದ್ದು XX Chromosome. ಹೆಣ್ಣಿನ ಅಂಡಾಶಯವು X chromosome ಅನ್ನು ಸಂಯೋಗಕ್ಕೆ ದಾನ ಮಾಡಿದರೆ, ಗಂಡಿನ ವೀರ್ಯವು X ಅಥವಾ Y Chromosome ಅನ್ನು ದಾನ ಮಾಡುತ್ತೆ. ಯಾವ Chromosome ದಾನ ಮಾಡಿದೆ ಅನ್ನೋದರ ಮೇಲೆ ಹುಟ್ಟುವ ಮಗುವಿನ ಲಿಂಗ ನಿರ್ಧಾರ ಆಗುತ್ತೆ. ಹುಟ್ಟುವ ಮಗು ಹೆಣ್ಣಾಗಿದ್ದರೆ, ಅದರಲ್ಲಿ ತಾಯಿಯ X chromosome ಹಾಗು ತಂದೆಯ X chromosome ಸೇರಿದೆ ಎಂದರ್ಥ. ಗಂಡು ಮಗುವಾದರೆ, ತಾಯಿಯ X chromosome ಹಾಗು ತಂದೆಯ Y chromosome ಸೇರಿದೆ ಎಂದರ್ಥ.

ಇದಿಷ್ಟು ಬಯಾಲಜಿ ಪಾಠ. ಇದನ್ನೇ ಗಮನಿಸಿದರೆ, ತಂದೆಯ Y chromosome ತನ್ನ ಗಂಡು ಮಕ್ಕಳಿಗೆ ವಂಶಾವಳಿಯಾಗಿ ಬಂದಿರುತ್ತದೆ. ಹೆಣ್ಣು ಮಗುವಿಗೆ ತಾಯಿಯ X chromosome ಹಾಗು ತಂದೆಯ X chromosome ಬಂದರೂ, ತಾಯಿಯ X chromosome ಯಾರಿಂದ ಬಂದಿದ್ದು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅದು ಅವರ ಅಜ್ಜಿಯದ್ದೋ ಅಥವಾ ತಾತನದ್ದೋ ಎಂದು. ತಂದೆಯ X chromosome ಕಥೆಯು ಅಷ್ಟೇ. ಅದು ಅವನ ತಾಯಿಯದ್ದೋ ಅಥವಾ ತಂದೆಯದ್ದೋ ಎಂದು ಹೇಳಲು ಆಗುವುದಿಲ್ಲ. ಪರೀಕ್ಷೆ ಮಾಡಿ ಹೇಳಿದರೂ, ಅದು ಎಲ್ಲರ ವಿಷಯದಲ್ಲೂ ಹೀಗೆ ಎಂದು generalize ಮಾಡುವುದು ಕಷ್ಟ. ಹಾಗಾಗಿ, ಗಂಡು ಮಕ್ಕಳಿಗೆ ವಂಶಪಾರಂಪರ್ಯವಾಗಿ ಬಂದಿರುವ ಬಳುವಳಿ ಎಂದರೆ Y chromosome ಮತ್ತು ಅದರ ವಿಶಿಷ್ಟ ಗುಣಗಳು. ಹಾಗಾಗಿ, ವೈಜ್ಞಾನಿಕವಾಗಿ ನನ್ನ ಗೋತ್ರ ಕೌಂಡಿನ್ಯ ಎಂದರೆ, ನನ್ನ Y chromosome ಕೌಂಡಿನ್ಯ ಮುನಿಯದ್ದು ಎಂಬ ನಂಬಿಕೆ. ಹಾಗಾಗಿ ಗಂಡನ ಗೋತ್ರ ಮಕ್ಕಳಿಗೆ ಎಂಬ ವಾಡಿಕೆ ಬಂತೋ ಏನೋ. ಇದರ ಆಧಾರದ ಮೇಲೆ ಸಮಾಜದ ಉಳಿದ ಸಂಪ್ರದಾಯಗಳು, ವಾಡಿಕೆಗಳು ಹುಟ್ಟಿಕೊಂಡಿತೇನೋ.. ಅಂದರೆ, ಗಂಡನ ಮನೆಗೆ ಹೆಣ್ಣು ಹೋಗಬೇಕು ಎಂಬಿತ್ಯಾದಿ ಪದ್ಧತಿಗಳು. ಹೀಗೆಂದ ಮಾತ್ರಕ್ಕೆ ಗಂಡು ಹೆಚ್ಚು ಹೆಣ್ಣಲ್ಲ ಎಂಬ ವಾದವಲ್ಲ.. ಗಂಡಿಗೆ Y chromosome ಇದೆ ಎಂದ ಮಾತ್ರಕ್ಕೆ ಸೃಷ್ಟಿ ಕ್ರಿಯೆ ಅವನ ಇಚ್ಛೆಯಲ್ಲ. ಅದಕ್ಕೆ ಇನ್ನೊಂದು X chromosome ಬೇಕೇ ಬೇಕಲ್ಲ? ಪ್ರಕೃತಿ ಗಂಡು ಹಾಗು ಹೆಣ್ಣು ಇಬ್ಬರಿಗೂ ನ್ಯೂನ್ಯತೆಗಳನ್ನು ಕೊಟ್ಟಿವೆ. ಇಬ್ಬರು ಒಬ್ಬರಿಗೊಬ್ಬರು ಆದಾಗ ಮಾತ್ರ ಪರಿಪೂರ್ಣ ಆಗುವಂತೆ ಮಾಡಿದೆ! ಇದು ನನ್ನ ಥಿಯರಿ.
ಇವಿಷ್ಟು ನನಗಿರುವ ಅಲ್ಪ ಜ್ಞಾನದ ಮೇಲೆ ಹೇಳಿರುವುದು. ತಪ್ಪಿದ್ದಲ್ಲಿ ತಿಳಿಸಿ ಮತ್ತು ಕ್ಷಮಿಸಿ 🙂

Comments

Popular posts from this blog

ಸ್ಮೃತಿಗೆ ಬಾರದು ನಿನ್ನ ಉಗಮ...

ಗುಟ್ಟು

ಕನ್ಯೆಯನ್ನ ದಾನ ಮಾಡ್ಬೇಕಾ??