ಗುಟ್ಟು

ಇದಾವ ಬಗೆಯ ಗುಟ್ಟೆ0ದು ವರ್ಣಿಸಲಿ..
ಪದಗಳಿಗೆ ನಿಲುಕದ, ಬಿಕ್ಕಟ್ಟಿಗೆ ಸಿಲುಕದ,
ಇದಾವ ಬಗೆಯ ಗುಟ್ಟು..

ವರ್ಷದ ತುಮುಲವ ಹರ್ಷಿಸಿ ಕುಣಿಯುವ
ಮಯೂರಿಗೆ ಬಾನು ಹೇಳಿದ ಗುಟ್ಟೋ?
ವಸಂತನಾಗಮನಕೆ ನವ ಉಡುಗೆ ತೊಡುವ
ರಮ್ಯ ಪ್ರಕೃತಿಗೆ ಋತು ಪಿಸುಗುಟ್ಟ ಗುಟ್ಟೋ?
ಇದಾವ ಬಗೆಯ ಗುಟ್ಟು..

ಭವ್ಯಾಗಸದಿ ಸ್ವಚ್ಛಂದತೆಯಿಂ ಹಾರುವ ಖಗಕೆ
ಮರಿಗಳು ಹಸಿವೆಂದು ಉಲಿಯುವ ಗುಟ್ಟೋ?
ಕುಟಿಲ ಕಾನನಕೆ ಝುಳು-ಝುಳು ಎಂದು
ಸರವು ಸ್ವರಗಳಿಂದ ಮೆಲ್ಲನೆ ನುಡಿಯುವ ಗುಟ್ಟೋ?
ಇದಾವ ಬಗೆಯ ಗುಟ್ಟು..

ಪ್ರೇಮ ಕಾವ್ಯದ ಮೊದಲ ಅಕ್ಷರ ಬರೆಯುವ
ತರುಣಿಗೆ ತರುಣನು ಹೇಳಿದ ಗುಟ್ಟೋ?
ಮುಗ್ಧ ಹೃದಯವ ಹಿಗ್ಗಿಸುವಂತಹ
ಪುಟ್ಟ ಕಂದನ ಸ್ನೇಹಮಯ ಗುಟ್ಟೋ?
ಇದಾವ ಬಗೆಯ ಗುಟ್ಟು..

ಭವ್ಯ ಭವಿತ್ವದಿ ನಿರಂತರ ಯಾನಕೆ
ಪೂರ್ಣ ವಿರಾಮದ ಸಂಭವದ ಗುಟ್ಟೋ?
ಮದಮೋಹ ಮತ್ಸರವ ಬದಿಗಿಟ್ಟು ಸಾಧಿಸುವ
ಇಹಪರ ಸಾಧನೆಯ ಮಾರ್ಗದ ಹಿಂದಿರುವ ಗುಟ್ಟೋ?
ಇದಾವ ಬಗೆಯ ಗುಟ್ಟೆ0ದು ವರ್ಣಿಸಲಿ..



Comments

Popular posts from this blog

ಸ್ಮೃತಿಗೆ ಬಾರದು ನಿನ್ನ ಉಗಮ...

ಕನ್ಯೆಯನ್ನ ದಾನ ಮಾಡ್ಬೇಕಾ??