Posts

Showing posts from May, 2016

ನಾ ಮರೆಯಲಾರೆ......

Image
ನವ ಮಾಸಗಳ ಬೆಚ್ಚನೆಯ ಆಲಿಂಗನ ತೊರೆದು ನಡೆದ ಅಂದಿನ ದಿನ ಎದೆಯ ತುಂಬಿತ್ತು ಸಂತಸದ ವಿನಾ ನಿನ್ನ ಒಡಲ ಬಿಡುವ ನೋವಿನ ಆಕ್ರಂದನ. ನಾ ಅತ್ತರೂ ನೀ ನಕ್ಕ ಕೇವಲ 'ಆ' ಕ್ಷಣ ನನ್ನ ಉಲ್ಲಾಸಮಯ ಬಾಲ್ಯಕ್ಕಾಯಿತು ಸೋಪಾನ.. ಅಮೃತವಿತ್ತ ನಿನ್ನೆದೆಗೆ ಒದ್ದ ನನ ಪಾದಕೆ ನೀಡಿದೆ ನೀ ಹರ್ಷಮಯ ಚುಂಬನ.. ಪ್ರತಿದಿನದ ಆ ವಾತ್ಸಲ್ಯದ ರಾಗಕೆ ಮನಸ್ಸು ಜಾರುತ್ತಿತ್ತು ಸುಖ ನಿದ್ರೆಗೆ ಗೆಳೆಯರೊಡನೆ ಆಡಿದ ಆ ಜಗಳಕೆ ನೀ ಕೊಟ್ಟ ಪೆಟ್ಟು...ಇನ್ನೂ ನೋಯುತ್ತಿದೆ.. ಅಮ್ಮ, ನೀನುಣಿಸಿದ ಆ ತುತ್ತನು, ಕಥೆ ಹೇಳಿ,ಮಲಗಿಸಿ ನೀಡಿದ ಆ ಮುತ್ತನು, ಬಾಲ್ಯದ ಪ್ರತಿ ಅರೆ ಕ್ಷಣವನು ಚಿರನಿದ್ರೆಗೆ ಜಾರುವ ತನಕ ನಾ ಮರೆಯಲಾರೆ.....

ತಡಮಾಡದೆ ನೀ ಬಂದು ಸೇರು

Image
ತಡಮಾಡದೆ ನೀ ಬಂದು ಸೇರು ನಾ ಕಳುಹಿಸಿರುವೆ ನನ್ನ ಕನಸಿನ ತೇರು.. ತೀರದಾ ಒಲುಮೆಯ ದಾಹದಿ ತೀರವಾ ಸೇರುವ ತವಕ.. ನಡುವೆ ನಮ್ಮಯ ಮನದಿ ಭಾವ ಮಿಲನವಿರೆ ಪುಳಕ.. ಇಂತಿರೆ, ತಡಮಾಡದೆ ನೀ ಬಂದು ಸೇರು.. ತರಲು ನೀ ಬೇಸಿಗೆಯ ಬಿಸಿಲಲಿ ಹೃನ್ಮನ ತಣಿಸುವ ತಂಗಾಳಿ, ಚಿಂತೆಯ ಬೇಗೆಯಲಿ ನಾ ಬೇಯುತಿರೆ ಪ್ರೀತಿಯ ತಂಗಾಳಿಯೊಡನೆ... ತಡಮಾಡದೆ ನೀ ಬಂದು ಸೇರು.. ಮನದ ಅಲೆಗಳ ಘರ್ಷಣೆ ಏನಿತೆ ಇರಲಿ, ಬಾಳ ಸಾಗರದ ಪಯಣ ಬಹಳಷ್ಟಿಹುದು.. ನಾವಿಕನಾಗಿರುವೆ ಈ ನಮ್ಮ ಪಯಣಕೆ, ದೂರದಿಗಂತವ ಸೇರುವ ನಿಟ್ಟಿನೊಳು, ತಡಮಾಡದೆ ನೀ ಬಂದು ಸೇರು.. ನಾ ಕಳುಹಿಸಿರುವೆ ಹೂ ತೇರನು..

ಒಮ್ಮಿಂದೊಮ್ಮೆಲೆ ಬಂದು ಬಿಡು. .

Image
ಒಮ್ಮಿಂದೊಮ್ಮೆಲೆ ಬಂದು ಬಿಡು ಮುಚ್ಚು ಮರೆಯ ಆಟ ಬಿಟ್ಟು, ಛಾಯೆ ನಿನ್ನದು ನಾ ಕಂಡರೂ ಸೋತೆ ನಿನ್ನನು ಬಳಸಲು. . ಕಣ್ಣ ತಣಿವ ನಿನ್ನ ಅಂದವು ಬೀಸು ಗಾಳಿಯ ಸಖ್ಯ ಬೆಳೆಸಿ ಕಳುಹಿದ ತಂಗಾಳಿ ಮೈಯನು ಸೋಕಿ ಸುಳಿವನು ನೀಡಿತಾದರೂ ಸೋತೆ ನಿನ್ನನು ಬಳಸಲು. . ಕುಸುಮ ಕೋಮಲ ನಿನ್ನ ಪಾದವು ಮೆಲ್ಲ ನಡೆದು ಸ್ಪೃಶಿಸಿದಂತಹ , ಸದ್ದ ನಾನು ಕೇಳಿದಾದರೂ ಸೋತೆ ನಿನ್ನನು ಬಳಸಲು. . ನಾನು ಕಾಯುವ ಹೃದಯ ನಿನ್ನದು ನೀನೇ ಇರುವ ಹೃದಯ ನನ್ನದು, ನಿನ್ನ ಸನ್ನಿಧಿ ತೋರಲದರ ಮಿಡಿತವದು ಅನುರಣಿಸಿತಾದರೂ, ಸೋತೆ ನಿನ್ನನು ಬಳಸಲು. .

ಗುಟ್ಟು

Image
ಇದಾವ ಬಗೆಯ ಗುಟ್ಟೆ0ದು ವರ್ಣಿಸಲಿ.. ಪದಗಳಿಗೆ ನಿಲುಕದ, ಬಿಕ್ಕಟ್ಟಿಗೆ ಸಿಲುಕದ, ಇದಾವ ಬಗೆಯ ಗುಟ್ಟು.. ವರ್ಷದ ತುಮುಲವ ಹರ್ಷಿಸಿ ಕುಣಿಯುವ ಮಯೂರಿಗೆ ಬಾನು ಹೇಳಿದ ಗುಟ್ಟೋ? ವಸಂತನಾಗಮನಕೆ ನವ ಉಡುಗೆ ತೊಡುವ ರಮ್ಯ ಪ್ರಕೃತಿಗೆ ಋತು ಪಿಸುಗುಟ್ಟ ಗುಟ್ಟೋ? ಇದಾವ ಬಗೆಯ ಗುಟ್ಟು.. ಭವ್ಯಾಗಸದಿ ಸ್ವಚ್ಛಂದತೆಯಿಂ ಹಾರುವ ಖಗಕೆ ಮರಿಗಳು ಹಸಿವೆಂದು ಉಲಿಯುವ ಗುಟ್ಟೋ? ಕುಟಿಲ ಕಾನನಕೆ ಝುಳು-ಝುಳು ಎಂದು ಸರವು ಸ್ವರಗಳಿಂದ ಮೆಲ್ಲನೆ ನುಡಿಯುವ ಗುಟ್ಟೋ? ಇದಾವ ಬಗೆಯ ಗುಟ್ಟು.. ಪ್ರೇಮ ಕಾವ್ಯದ ಮೊದಲ ಅಕ್ಷರ ಬರೆಯುವ ತರುಣಿಗೆ ತರುಣನು ಹೇಳಿದ ಗುಟ್ಟೋ? ಮುಗ್ಧ ಹೃದಯವ ಹಿಗ್ಗಿಸುವಂತಹ ಪುಟ್ಟ ಕಂದನ ಸ್ನೇಹಮಯ ಗುಟ್ಟೋ? ಇದಾವ ಬಗೆಯ ಗುಟ್ಟು.. ಭವ್ಯ ಭವಿತ್ವದಿ ನಿರಂತರ ಯಾನಕೆ ಪೂರ್ಣ ವಿರಾಮದ ಸಂಭವದ ಗುಟ್ಟೋ? ಮದಮೋಹ ಮತ್ಸರವ ಬದಿಗಿಟ್ಟು ಸಾಧಿಸುವ ಇಹಪರ ಸಾಧನೆಯ ಮಾರ್ಗದ ಹಿಂದಿರುವ ಗುಟ್ಟೋ? ಇದಾವ ಬಗೆಯ ಗುಟ್ಟೆ0ದು ವರ್ಣಿಸಲಿ..