ಕನ್ಯೆಯನ್ನ ದಾನ ಮಾಡ್ಬೇಕಾ??

ಸ್ವಲ್ಪ ಹಳೆ ಕನ್ನಡ ಚಿತ್ರಗಳನ್ನ ನೋಡಿದ್ರೆ, ತುಂಬಾ ಪರಿಚಿತ ಸಂಭಾಷಣೆ ಅಂದ್ರೆ, “ನಾವು ಹೆಣ್ಣು ಹೆತ್ತೋರಪ್ಪ.. ನಮ್ ಕಷ್ಟ ನಮಿಗ್ ಗೊತ್ತು… “, “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು..”, “ನನ್ನ ಮಗಳನ್ನ ಮದುವೆ ಆಗಿ, ಅವಳಿಗೊಂದು ಬಾಳು ಕೊಡಿ..” ಇತ್ಯಾದಿ.. ಈ ರೀತಿ ಚಿತ್ರಗಳನ್ನ ನೋಡುತ್ತಿದ್ದಾಗ ನಮ್ಮದು ಪುರುಷ ಪ್ರಧಾನ ಸಮಾಜ ಅನ್ನೋದು ಖಾತ್ರಿ ಆಗುತ್ತೆ. ಹೆಣ್ಣು ಹೆತ್ತ ಮಾತ್ರಕ್ಕೆ ಇಷ್ಟೆಲ್ಲಾ ಕಷ್ಟ ಇರತ್ತ ಅಂತೆಲ್ಲ ಯೋಚ್ನೆ ಮಾಡ್ತಿದ್ದೆ. ನಮ್ಮ ಅಕ್ಕಂದಿರ ಮದುವೆ ಮಾಡುವಾಗಲೂ ನಮ್ಮ ಕಡೆಯವರೇ ಛತ್ರ ಗೊತ್ತು ಮಾಡ್ಬೇಕು, ಅಡುಗೆಯವರನ್ನ ಗೊತ್ತುಮಾಡಬೇಕು, ಎಲ್ಲ ಖರ್ಚು ನಮ್ಮದೇ ಇತ್ಯಾದಿ ಮಾತುಗಳನ್ನ ಕೇಳುತ್ತಿದ್ದೆ. ಭಾವನೂ ಮದ್ವೆ ಆಗ್ತಿಲ್ವಾ? ಅವರು ಯಾಕೆ ಅರ್ಧ ಖರ್ಚು ಹಾಕ್ಬಾರ್ದು ಅಂತ ನಾ ಕೇಳ್ದಾಗ, ನಮ್ಮ ದೊಡ್ಡಮ್ಮ ಹೇಳಿದ್ದು ಅದೇ.. “ನಾವು ಹೆಣ್ಣಿನ ಕಡೆಯವರಲ್ವಾ, ನಾವೇ ಎಲ್ಲ ಮಾಡ್ಬೇಕು” ಅಂತ.
ಈ ಮಧ್ಯೆ ಇನ್ನಷ್ಟು ಹಳೆಯ ಚಿತ್ರಗಳು, ಮುಂಚಿನ ಕಾಲದ ಜನಜೀವನ ಬಿಂಬಿಸುವ ಕೆಲವು ಪುಸ್ತಕಗಳು, ಚಿತ್ರಗಳು, ಧಾರಾವಾಹಿಗಳನ್ನ ನೋಡುತ್ತಿದ್ದೆ. ಒಂದು ವಿಷಯ ಖಚಿತ ಆಗಿದ್ದು, ಗಂಡಿನ ಕಡೆಯವರು ಹೆಣ್ಣಿನ ಮನೆಗೆ ಹೋಗಿ, ಹೆಣ್ಣನ್ನು ನೋಡಿ, ಅವರ ಮನೆಯಲ್ಲೇ ವಿವಾಹ ಶಾಸ್ತ್ರ ಮುಗಿಸಿ, ಹೆಣ್ಣನ್ನು ಕರೆದುಕೊಂಡು ಹೋಗೋದು ವಾಡಿಕೆ ಅನ್ನೋ ವಿಷಯ. ಆದರೆ ಗಂಡಿನ ಮನೆಗೆ ಬಂದು ಹೆಣ್ಣನ್ನು ಮದುವೆ ಮಾಡಿಕೊಟ್ಟ ವಿಷಯಗಳನ್ನೇಕೋ ಯಾರು ಚಿತ್ರಿಸಿಲ್ಲ. ಆ ರೀತಿ ನಡೆದಿತ್ತೋ ಇಲ್ಲವೋ ನಾ ತಿಳಿಯೆ.
ಇರಲಿ, ವಿಷಯ ಏನಂದ್ರೆ, ಹೆಣ್ಣಿನ ಕಡೆಯವರೇ ಯಾಕೆ ಮದುವೆ ಮಾಡಿಕೊಡಬೇಕು ಅನ್ನೋ ಪ್ರಶ್ನೆ. ನಾ ನನ್ನ ಮುಂಚಿನ ಲೇಖನದಲ್ಲಿ ವಂಶವಾಹಿನಿಯ ಬಗ್ಗೆ ನನಗೆ ಗೊತ್ತಿರುವ ವಿಷಯಗಳನ್ನ ತಿಳಿಸಿದ್ದೆ. ಅದೇ ದಾರಿಯಲ್ಲಿ ಚಿಂತಿಸಿದರೆ, ಬಹುಷಃ ಗಂಡಿನ ವಂಶವಾಹಿನಿಗೆ ಮತ್ತೊಂದು ಜೀವ ಸೇರ್ಪಡೆಯಾಗಲಿ ಎನ್ನುವ ಉದ್ದೇಶಕ್ಕೆ ಗಂಡಿನ ಕಡೆಯವರೇ ಹೆಣ್ಣನ್ನು ಅರಸಿ ಬರುತ್ತಿದ್ದರೇನೋ.. ಮೊದಲು ಗಂಡಿನ ತಂದೆ ತಾಯಿಗಳು ಬಂದು ಹೆಣ್ಣನ್ನು ನೋಡಿ, ಇಷ್ಟ ಆದಲ್ಲಿ ಒಪ್ಪಿ, ವಿವಾಹದ ಏರ್ಪಾಟನ್ನು ಮಾಡಿಕೊಳ್ಳುತ್ತಿದ್ದರು. ಇದನ್ನೇ ಮುಂದಿನ ದಿನಗಳಲ್ಲಿ ವಧು ‘ಪರೀಕ್ಷೆ’ ಎಂಬ ಹೆಸರಿನಡಿ ಶಾಸ್ತ್ರವನ್ನು ಹುಟ್ಟುಹಾಕಿದರೆಂಬುದು ವಿಪರ್ಯಾಸ. ಅಂತರ್ಪಟ ಇಳಿಸುವ ಮೊದಲು ಗಂಡು ಹೆಣ್ಣುಗಳು ಪರಸ್ಪರ ಮಾತನಾಡುತ್ತಿದ್ದರೋ, ನೋಡುತ್ತಿದ್ದರೋ ಇಲ್ಲವೋ ತಿಳಿಯದು. ಒಂದು ಕಡೆ ಇದು Romantic ಅನಿಸಿದರೂ, ಕೆಲವರಿಗೆ shocking ಆಗಿತ್ತು ಎಂಬುದನ್ನು ಕೇಳಿದ್ದೆ/ಓದಿದ್ದೆ. ಅದು ಬೇರೆಯದ್ದೇ ವಿಷಯ ಬಿಡಿ. ಒಟ್ಟಾರೆ, ತಮ್ಮ ವಂಶವಾಹಿನಿ ಬೆಳೆಯಲು, ತಮ್ಮ ಮನೆಗೆ ಮತ್ತಷ್ಟು ಬೆಳಕನ್ನು ತರಲು ಮಗನಿಗೆ ಮಾಡುವೆ ಮಾಡಿ ಸೊಸೆಯನ್ನು ತರುತ್ತಿದ್ದರು. ಆ ನಿಟ್ಟಿನಲ್ಲಿ ಹೆಣ್ಣಿನ ಮನೆಗೇ ಹೋಗಿ, ಅವರ ಮನೆಯಲ್ಲೇ ಮದುವೆ ಶಾಸ್ತ್ರ ಮುಗಿಸುತ್ತಿದ್ದರು. ಮನೆಯ ಮುಂದೆ ಚಪ್ಪರ ಹಾಕಿಸಿ, ಅಲ್ಲೇ ಮದುವೆ! ಹಿಂದಿನ ದಿನ ಗಂಡಿನ ಕಡೆಯವರು ಬಂದಾಗ, ಅವರಿಗೆ ಸ್ವಾಗತ ಮಾಡಿ, ಗಂಡಿಗೆ ಉಡುಗೊರೆಗಳನ್ನ ಕೊಟ್ಟು, ತಿಂಡಿ ತಿನಿಸುಗಳನ್ನ ಬಡಿಸಿ, ಮದುವೆಗೆ ಉಡುಗೊರೆಗಳನ್ನ ಕೊಡುವುದು. ಗಂಡಿನ ಕಡೆಯವರು ಹೆಣ್ಣಿಗೆ ಉಡುಗೊರೆಗಳನ್ನ ಕೊಟ್ಟು ಮಾರನೆಯ ದಿನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದೇ ‘ವರಪೂಜೆ’ ಶಾಸ್ತ್ರ. ಕೆಲವು ಪ್ರಾಂತ್ಯಗಳಲ್ಲಿ ಮದುವೆಯ ದಿನವೇ ಗಂಡಿನ ಕಡೆಯವರ ಆಗಮನ ಆಗುತ್ತಿದ್ದದ್ದು ಉಂಟು. ಮುಂಜಾನೆ ಎದ್ದು ಎಣ್ಣೆ ಶಾಸ್ತ್ರ ಮುಗಿಸಿ, ಕನ್ಯಾದಾನ ಮಾಡಿ, ನವ ವಧುವಿಗೆ ಆಶೀರ್ವದಿಸಿ ಅವಳ ಗಂಡನ ಮನೆಯವರೊಟ್ಟಿಗೆ ಕಳುಹಿಸಿಕೊಡುತ್ತಿದ್ದರು.
ಕ್ರಮೇಣ, ಮನೆಗಳಲ್ಲಿ ಇಷ್ಟು ಶಾಸ್ತ್ರಗಳನ್ನ ಮಾಡಲು ಅನುಕೂಲ ಇಲ್ಲದ ಸಮಯದಲ್ಲಿ, ಛತ್ರಗಳು/ ಕಲ್ಯಾಣ ಮಂಟಪಗಳು ತಲೆ ಎತ್ತಿದವು. ತಮ್ಮ ಮನೆಯಲ್ಲಿ ಮಾಡಲಾಗುತ್ತಿಲ್ಲ ಎಂದು ಹೆಣ್ಣಿನ ಕಡೆಯವರು ಹತ್ತಿರದ ಛತ್ರದಲ್ಲಿ, ತಮ್ಮದೇ ಖರ್ಚಿನಲ್ಲಿ ಮದುವೆ ಮಾಡಿಕೊಡುತ್ತಿದ್ದರು. ಇದೇ ಕೊನೆಗೆ ಶಾಸ್ತ್ರವಾಗಿ ಹೋಯಿತು. ಪ್ರೀತಿಯಿಂದ ಕೊಡುತ್ತಿದ್ದ ಉಡುಗೊರೆಗಳು ನಂತರದ ದಿನಗಳಲ್ಲಿ ‘ವರದಕ್ಷಿಣೆ’ ಎಂಬ ಹಣೆಬರಹದ ಅಡಿ ಬಲವಂತವಾಗಿ ಸ್ವೀಕರಿಸುವ ಉಡುಗೊರೆಯಾಯಿತು. ‘ನಮ್ಮ ಮಗಳನ್ನ ಅವರು ಜೀವನ ಪರ್ಯಂತ ನೋಡಿಕೊಳ್ಳುತ್ತಾರೆ, ಹಾಗಾಗಿ ನಾವು ಇಷ್ಟಾದರೂ ಮಾಡಬಾರದೇ’ ಅಂತ ಎಷ್ಟೋ ವಧುವಿನ ತಂದೆ ತಾಯಂದಿರು ಹೇಳುವುದನ್ನ ಕೇಳಿದ್ದೇನೆ. ಅವರ ಮಗಳು ಸಹ ಗಂಡನ ಕುಟುಂಬವನ್ನ ನೋಡಿಕೊಳ್ಳುತ್ತಾಳೆ ಎಂಬುದನ್ನ ಮರೆತೇ ಬಿಡುತ್ತಾರೆ ಪಾಪ.
ಇಂದಿನ ಕಾಲಮಾನದಲ್ಲಿ ಲಕ್ಷಾಂತರ ರೂಪಾಯಿಗಳನ್ನ ಕೂಡಿಟ್ಟು, ಹೆಣ್ಣಿನ ತಂದೆಯಾದವನು ಎಲ್ಲ ಹೊಣೆ ಹೊತ್ತು ಮಗಳ ಮದುವೆ ಮಾಡುತ್ತಾನೆ. ಹೆಣ್ಣು ಗಂಡು ಇಬ್ಬರೂ ದುಡಿಯುತ್ತಾರೆ. ಇಬ್ಬರು ಸಮನಾಗಿ ಖರ್ಚು ಹಾಕಿಕೊಂಡು ಮದುವೆ ಮಾಡಿಕೊಳ್ಳಬಹುದಲ್ಲವೇ? ಈ ಬದಲಾವಣೆ ತಂದರೆ ಎಷ್ಟೋ ಭ್ರೂಣ ಹತ್ಯೆಗಳನ್ನ ತಡೆಗಟ್ಟಬಹುದಲ್ಲವೇ? ವರದಕ್ಷಿಣೆ ಪಿಡುಗು ಸಂಪೂರ್ಣವಾಗಿ ನಾಶವಾಗುತ್ತೆ. ಸಮಾಜದಲ್ಲಿ ಸಮಾನತೆ ಸಂಪೂರ್ಣವಾಗಿ ಸುಸ್ಥಿರವಾಗುತ್ತದೆ ಅಲ್ವಾ? ಕಾಲಕ್ಕೆ ತಕ್ಕಂತೆ ಬದಲಾಗುವಷ್ಟು Flexible ಆಗಿರುವ ನಮ್ಮ ಆಚರಣೆಗಳಲ್ಲಿ ಈ ಬದಲಾವಣೆಯನ್ನು ತಂದಲ್ಲಿ ಇನ್ನಷ್ಟು ಮೆರುಗನ್ನು ನಾವೇ ಹೆಚ್ಚಿಸಬಹುದಲ್ಲವಾ?
ಏನಪ್ಪಾ ಇವನು ತಲೆಬರಹ ನೇ ಏನೋ ಕೊಟ್ಟಿದ್ದಾನೆ, ಏನೇನೋ ಬರಿತಿದಾನೆ ಅನ್ಕೊಂಡ್ರಾ? ಇಷ್ಟೆಲ್ಲಾ ತಿಳಿದ ಮೇಲೆ, ನನಗೆ ಕಾಡುವ ಪ್ರಶ್ನೆ ಏನಂದ್ರೆ, ವಂಶವಾಹಿನಿ ಬೆಳೆಸಲು ಸಹಕರಿಸುವ, ಮನೆಯನ್ನು ಬೆಳಗುವ ಕನ್ಯೆಯನ್ನು ಬಳುವಳಿಯಾಗಿ ನೀಡುತ್ತಿದ್ದೇವೆ ಎನ್ನದೆ, ದಾನ ಮಾಡುತ್ತೇವೆ ಎಂದೇಕೆ ಹೇಳುತ್ತಾರೆ? ಗಂಡಿನ ಕಾಲನ್ನು ತೊಳೆದು ದಾನ ನೀಡುವುದೇಕೆ? ಹಸ್ತ ತೊಳೆದು ಪಾಣಿಗ್ರಹಣ ಮಾಡಿಸಿದರೆ ಸಾಕಲ್ಲವೆ? ನನಗಂತೂ ಉತ್ತರ ತೋಚಲಿಲ್ಲ. ನಿಮಗಾದರು ತಿಳಿದಲ್ಲಿ ಹೇಳುವಿರಾ?

Comments

Popular posts from this blog

ಸ್ಮೃತಿಗೆ ಬಾರದು ನಿನ್ನ ಉಗಮ...

ಗುಟ್ಟು