Posts

ಸ್ಮೃತಿಗೆ ಬಾರದು ನಿನ್ನ ಉಗಮ...

Image
ಸ್ಮೃತಿಗೆ ಬಾರದು ನಿನ್ನ ಉಗಮ ಪೂರ್ಣ ಚಿತ್ತ ಪ್ರೀತಿಯೇ.. ಎದೆಯ ಒಳಗೆ ಆಸೆ ಬಿತ್ತಿದ ಭಾವಪೂರ್ಣ ಸ್ಫೂರ್ತಿಯೇ.. ನನ್ನ ತನುವರ್ಧದಲಿ ಪೂರ್ಣ ಮನ ತುಂಬಿರುವೆ ನನ್ನೆಲ್ಲ ಭಾವಗಳ ಜೀವ ನೀನಾಗಿರುವೆ ನೋಟದ ನೆರವಲ್ಲಿ ನನ್ನೆದೆಯ ಸೇರಿರುವೆ ನೆತ್ತರದ ಕಣ ಕಣದಿ ಅನುರಕ್ತವಾಗಿರುವೆ..ಆದರೂ.. ಸ್ಮೃತಿಗೆ ಬಾರದು ನಿನ್ನ ಉಗಮ.. ಭಾವಲೋಕದಿ ನೀ ಎನ್ನ ಸಂಗಾತಿ ಬಾಳ ಮಾಧುರ್ಯದ ಕೈಂಕರ್ಯದಿ ನೀನಾದೆ ಮೂಗುತಿ.. ಒರಟು ವೀಣೆಯೆಂಬ ನನ್ನಲ್ಲಿ ಮೀಟಿದೆ ನೀ ಇನಿದಾದ ತಂತಿ, ನೇಸರನ ಪ್ರತಿ ಕಣದಲ್ಲಿ ಕಾಂತಿ ನೀ ಚೆಲ್ಲುತಿರುವಾಗ, ಸ್ಮೃತಿಗೆ ಬಾರದು ನಿನ್ನ ಉಗಮ.. ನೂರು ಹೃದಯಗಳ ನಡುವೆ ನನ್ನೇಕೆ ಸೇರಿರುವೆ, ಸೇರಿ ಅಂತರಂಗದಿ ಕೋಲಾಹಲವ ಏರಿಸಿರುವೆ, ವರ್ಣ ಚಿತ್ತಾರಗಳ ಬಹುವಿಧದಿ ತುಂಬಿರುವೆ, ಇನ್ನೆಂದೂ ತೊರೆಯದ ಧಮನಿಯಲಿ ನೀ ಬೆರೆತಿರುವಾಗ, ಸ್ಮೃತಿಗೆ ಬಾರದು ನಿನ್ನ ಉಗಮ..

ಎಲ್ಲುಂಟು??

Image
ಕೇಳು ಖಗವೇ ಎನ್ನ ನೋವ,ಮನದಂಗಳದ ಅಳಲಾ.. ಪ್ರತಿ ನಿತ್ಯ ನಿನ್ನುಲಿಯ ನಾನಾಲಿಸುತಿರುವಾಗ, ಇಂದಾದರೂ ಕೇಳೆನ್ನ ಕರೆಯಾ.. ನಿನಗೆ ರೆಕ್ಕೆಗಳುಂಟು, ಹಾರುವಾ ಬಲವುಂಟು, ಗೂಡ ಕಟ್ಟುವ ಸಾಮರ್ಥ್ಯವುಂಟು, ನೋವ ಕೇಳ್ವ ನಿನ್ನವರುಂಟು, ನಿನ್ನ ಕುಡಿಗಳ ಸಾಕುವ ಚೈತನ್ಯವುಂಟು, ಈ ಉಂಟುಗಳ ಬಯಕೆ ನನಗೂ ಉಂಟು. ನನ್ನ ಮನಸಿಗೂ ರೆಕ್ಕೆಗಳುಂಟು, ಸ್ವಚ್ಛಂದತೆಯ ಕೊರತೆಯುಂಟು, ಗೂಡ ಗೋಡೆಗಳ ಅಳಿವಿನ ಅಂಜಿಕೆಯುಂಟು, ಅಣುಕುಗಳ ಸಾಂಗತ್ಯವುಂಟು, ಇನ್ನು ನನ್ನವರೆಲ್ಲುಂಟು??